Categories
PoemsByVolunteers

Time for Nature!!

By Chetan, Bangalore

ಮತ್ತೊಮ್ಮೆ ಮಳೆ ಹೂಯ್ಯುತಿದೆ..ಕಳೆದ ಮಳೆಗಾಲದ ಗತವೈಭವವ ಮರಳಿ ತರುತ..ಇಳೆಯ ಕೊಳೆಯಲ್ಲ ಒಮ್ಮೆಲೆ ತೊಳೆಯುತ‌‌‌.. !!

ಎಲ್ಲಿ ಹೋದವು ನಮ್ಮೆಲ್ಲರ ಆ ಬಾಲ್ಯದ ಮಳೆದಿನಗಳು?? ಆ ಸುರಿವ ಮಳೆಹನಿಯು ಮೈಯ ಚುಂಬಿಸುತಿರೆ ಮನದ ಭಾವ ಮಯೂರಿ ಗರಿಗೆದರಿ ಗುಡುಗು ಮಿಂಚುಗಳ ಸ್ವರ ಲಯ ತಾಳಕೆ ಮನಸೋಇಚ್ಛೆ ನರ್ತಿಸುವಾಗ ಅಪ್ಪನ ಏರುದನಿಗೆ ಬೆದರಿ ಒಡೋಡಿ ಅಮ್ಮನ ಒಡಲು ಹೊಕ್ಕಿದ್ದ ಆ ಬೆಚ್ಚನೆಯ ಕ್ಷಣಗಳು..ತಿಂದೊಡನೆ ಹಾಯ್ ಎನಿಸುತಿದ್ದ ಹಂಡೆಯೊಲೆಯ ಕೆಂಡದಲಿ ಸುಟ್ಟುತಿಂದ ಹಲಸಿನಬೀಜ‌, ಅಡುಗೆ ಮನೆಯಲಿ ಅತ್ತಿಗೆ ಕರಿದ ಮೆಣಸು ಹಪ್ಪಳ, ಸಂಡಿಗೆ, ನಾಲಿಗೆಗಿಟ್ಟೊಡನೆ ನೀರೊರುತಿದ್ದ ಅಜ್ಜಿಹಾಕಿದ ಮಿಡಿಮಾವಿನ ಉಪ್ಪಿನಕಾಯಿ..ನೆತ್ತಿ ಸುಡುವ ಹಂಡೆಯೊಲೆಯ ಬಿಸಿನೀರ ಮಜ್ಜನ..ರಾತ್ರಿಯೂಟಕೆ ಹೊಟ್ಟೆ ಬಿರಿಯೆ ರೊಟ್ಟಿ,ತರೇವಾರಿ ಕಾಯಿಪಲ್ಲೆಗಳು..ಮಳೆಯಬ್ಬರಕ್ಕೂ ಲೆಕ್ಕಿಸದೆ ಅಂಗಳದಲಿ ಹಾಸಿಗೆ ಹಾಸಿ ಎರೆಡರಡು ಕಂಬಳಿ ಹೊದ್ದು ಚಳಿಗೆ ಎದೆಯೊಡ್ಡಿ ಆಗತಾನೆ ಉಂಡು ಎಲೆಯಡಿಕೆ ಹಾಕುತಿದ್ದ ಅಜ್ಜನಿಗೆ ಕಥೆಹೇಳೆಂದು ಪೀಡಿಸಿ ಆ ಕಥೆಯ ಪಾತ್ರಧಾರಿಗಳೇ ತಾವಾಗುತ, ಮಧ್ಯೆ ಮಧ್ಯೆ ವಟಗುಟ್ಟುವ ಕಪ್ಪೆ ಜೀರುಂಡೆಗಳ ಶಪಿಸುತ ನಿದ್ರಾದೇವತೆ ಮಡಿಲಿಗೆ ಮೆಲ್ಲಗೆ ಜಾರಿ ಹೋದ ನಯನ ಮನೋಹರ ದಿನಗಳು..ಯಾಕೋ ಈಗ ಆ ದಿನಗಳ ನೆನೆದರೆ ಮನದಲ್ಲೊಂದು ಪ್ರಶ್ನೆ ಕಾಡುತದೆ, ಮಳೆಗಾಲವು ಸತ್ವ ಕಳೆದುಕೊಂಡಿತೆ ಅಥವಾ ಆಧುನಿಕತೆಯ ಅಂಧತ್ವದಲ್ಲಿ ಮಳೆಯ ಆನಂದಿಸುವ ನಮ್ಮೆಲ್ಲರ ಭಾವನೆಗಳು ಬರಿದಾಯಿತೆ…ಇಂತಿ ಒಬ್ಬ ಮಳೆ ಮಾರುವ ಹುಡುಗ!..ಚೇತನ್

Leave a comment